ದಶಾಜ್ಞೆಗಳು-
 	ತಾನು ಆರಿಸಿಕೊಂಡ ಒಂದು ಜನಾಂಗದ ಮೂಲಕ ಇಡೀ ಲೋಕವನ್ನು ಉದ್ಧರಿಸಬೇಕೆಂದು ಸಂಕಲ್ಪಿಸಿದ ದೇವರು ಇಸ್ರಾಯೇಲ್ಯರನ್ನು ಫ್ಯಾರೋನ ದಾಸ್ಯದಿಂದ ಬಿಡಿಸಿ ಕಾನಾನ್ ದೇಶಕ್ಕೆ ನಡೆಸುವ ವೇಳೆಯಲ್ಲಿ ಸೀನಾಯಿ ಪರ್ವತದಲ್ಲಿ ಅವರ ಜೊತೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡ. ತನ್ನ ಜನರು ನಡೆಯಬೇಕಾದ ರೀತಿಯನ್ನು ನಿರ್ದೇಶಿಸಿ ಒಡಂಬಡಿಕೆಯ ಹತ್ತು ಅಪ್ಪಣೆಗಳನ್ನು ಕೊಟ್ಟ.. ಅವನ್ನು ಸಂಕ್ಷೇಪಿಸಿ ಹೇಳುವುದಾದರೆ-1 ನಿನ್ನ ದೇವರಾದ ಯೆಹೋವ ನಾನೇ. ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು. 2 ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. 3 ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದು. 4 ಸಬತ್ ದಿನವನ್ನು ದೇವರ ದಿನವೆಂದು ಪರಿಶುದ್ಧ ಮಾಡಬೇಕು. 5 ತಂದೆತಾಯಿಗಳನ್ನು ಸನ್ಮಾನಿಸಬೇಕು. 6 ನರಹತ್ಯ ಮಾಡಬಾರದು. 7 ವ್ಯಭಿಚಾರ ಮಾಡಬಾರದು. 8 ಕದಿಯಬಾರದು. 9 ಮತ್ತೊಬ್ಬನ ಮೇಲೆ ಸುಳ್ಳು ಸಾಕ್ಷಿ ಹೇಳಬಾರದು. 10 ಮತ್ತೊಬ್ಬನ ಮನೆಯನ್ನು ಆಶಿಸಬಾರದು.

	ಈ ದಶಾಜ್ಞೆಗಳು (ಟೆನ್ ಕಮ್ಯಾಂಡ್‍ಮೆಂಟ್ಸ್) ಜೂಡಾಯಿಸಂ, ಕ್ರೈಸ್ತಧರ್ಮ ಹಾಗೂ ಇಸ್ಲಾಂ ಧರ್ಮಗಳ ನೈತಿಕ ನೆಲಗಟ್ಟುಗಳಾಗಿವೆ. 

	ಮೊದಲನೆಯ ನಾಲ್ಕು ಆಜ್ಞೆಗಳು ದೇವಮಾನವರೊಳಗಿನ ಸಂಬಂಧವನ್ನೂ ಅನಂತರದ ಆರು ಆಜ್ಞೆಗಳು ಮಾನವ ಮಾನವರೊಳಗಿನ ಸಂಬಂಧವನ್ನೂ ನಿರ್ದೇಶಿಸುತ್ತವೆ. ಧರ್ಮಶಾಸ್ತ್ರ ಪರಿಶುದ್ಧವಾದದ್ದಾದರೂ ಮಾನವ ಪಾಪಿಯಾದದ್ದರಿಂದ ಅನುಸರಿಸಲು ಅವನಿಗೆ ಆಗಲಿಲ್ಲ. ಈ ಅಸಹಾಯಕತೆಯಿಂದ ಮಾನವನನನ್ನು ವಿಮೋಚಿಸಲು ದೇವಕುಮಾತನದ ಯೇಸು ಅವತರಿಸಿದ. ಆತನ ಮೂಲಕವಾಗಿ ಆದ ಹೊಸ ಒಡಂಬಡಿಕೆಯ ಮೂಲಕ ಮಾತ್ರವೇ ದೇವ ಮಾನವರೊಳಗೆ, ಮಾನವ ಮಾನವರೊಳಗೆ ನಿಜವಾದ ಅನ್ಯೋನ್ಯತೆ ಸ್ಥಾಪಿಸಲು ಸಾಧ್ಯವಾಯಿತು.                                 	 (ಎಂ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ